ಒಲವಿನ ಬಾಣದ ಮೊನೆಯು ಇನ್ನೂ ಚುಚ್ಚುತಿದೆ ಹೇಗೆ ಹೇಳಲಿ ನಿನಗೆ
ತಣ್ಣಗೆ ಉರಿವ ದೀಪವೂ ಬಿಕ್ಕುತ ಕೇಳುತಿದೆ ಹೇಗೆ ಹೇಳಲಿ ನಿನಗೆ
ಕತ್ತಲು ಮುತ್ತುವ ಮುನ್ನ ಪ್ರೀತಿಯ ಬೆಳನ್ನಾದರೂ ಸುರಿಸೆಂದು
ಹಿಂಬದಿಯ ನೆರಳೂ ಭೂತವಾಗಿ ಕಾಡುತಿದೆ ಹೇಗೆ ಹೇಳಲಿ ನಿನಗೆ
ಚೈತ್ರದ ಚಿಗುರಿನ ದಣಿಯದ ಕೋಗಿಲೆಯ ದನಿಯ, ಸುರಿವ ಬೆಳದಿಂಗಳಿನ
ನಲುಮೆಯ ಭಾವನೆಯೆಲ್ಲ ತಿವಿದು ಹೇಳುತಿದೆ ಹೇಗೆ ಹೇಳಲಿ ನಿನಗೆ
ತೆಕ್ಕೆಗೊಗ್ಗದ ಚುಕ್ಕೆಯೊಂದು ಕಣ್ಣಾಚೆಗಿದ್ದರೂ ಕಣ್ಮಿಟುಕಿಸಿ
ಎದೆಯರಾಗ ಹಾಡಿ ತೇಲುತ ಪಿಸುಗುಡುತಿದೆ ಹೇಗೆ ಹೇಳಲಿ ನಿನಗೆ
ಬಾಂದಳದ ಆಚೆಗೆಲ್ಲ ಅಲೆಅಲೆಯಾಗಿ ತೇಲುತ ದೂರಕೆ ಸಾಗಿರುವ
ಪ್ರೇಮಗಾನದ ಹೊನಲು ಅನುರಣನಗೊಳುತಿದೆ ಹೇಗೆ ಹೇಳಲಿ ನಿನಗೆ
-ಸಿದ್ಧರಾಮ ಹಿರೇಮಠ
No comments:
Post a Comment