ಮೌನದ ಚಿಪ್ಪಿನೊಳಡಗಿದೆ ನೀನು ವೃಥಾ ಮಾತೇಕೆಂದು
ತುಟಿಗಳಂಚಿನಲಿ ಹುಡುಕಿದೆ ನಾನು ವೃಥಾ ಮಾತೇಕೆಂದು
ಬದುಕಿನ ಕ್ಷಣಗಳೆಲ್ಲ ಕಣ್ಣೆದುರೇ ಸೋರಿಹೋಗುತಿವೆ
ಹಿಡಿದಿಡಲು ಸಾಹಸ ಮಾಡುತಿಹೆನು ವೃಥಾ ಮಾತೇಕೆಂದು
ದೀಪದೊಳಡಗಿದ ಚೇತನವು ಎಲ್ಲಿಹುದೆಂದು ಹುಡುಕುತ
ಚೈತನ್ಯವನೇ ಉರಿಸಿ ಬದುಕಿಹೆನು ವೃಥಾ ಮಾತೇಕೆಂದು
ಸಾಗುವ ದಾರಿಗೆಲ್ಲಿ ಕೊನೆಯೆಂದು ತಿಳಿಯದೇ ಹಗಲಿರುಳು
ನಡೆದು ದಿನಗಳನೇ ಬಗೆಯುತಿಹೆನು ವೃಥಾ ಮಾತೇಕೆಂದು
ದಿಟ್ಟಿ ದಣಿದಷ್ಟು ದೂರ ಒಂದಾಗಿ ನಿಂತಿದೆ ನೆಲಬಾನು
ನಾನೀನೆಂಬುದ ತಿಳಿದಿಹೆನು ಸಿದ್ಧ ವೃಥಾ ಮಾತೇಕೆಂದು
